ಚಂಪಾರಣ್ ಸತ್ಯಾಗ್ರಹ

ಈಗಿನ ಬಿಹಾರ ರಾಜ್ಯದ ತಿರುಹುತ್ ವಿಭಾಗದ ಚಂಪಾರಣ್ ಜಿಲ್ಲೆಯಲ್ಲಿ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ. ನೀಲಿಯನ್ನು ಬೆಳೆಯುತ್ತಿದ್ದ ರೈತರ ಕಷ್ಟದ ನಿವಾರಣೆಗಾಗಿ ಇದನ್ನು ಕೈಗೊಳ್ಳಲಾಯಿತು. ರಾಮಾಯಣದ ಪ್ರಕಾರ ಚಂಪಾರಣ್ಯ ಜನಕರಾಜನ ನಾಡು. ಹಿಮಾಲಯ ಪರ್ವತದ ಪಾದತಲದಲ್ಲಿ ಅಡಗಿ ಗಂಗಾನದಿಯ ತೀರ ಉತ್ತರಕ್ಕೆ ನೇಪಾಳದ ಗಡಿಯವರೆಗೆ ಹರಡಿರುವ, ಜನಸಮೃದ್ಧವಾದ, ಜಲಸಮೃದ್ಧವಾದ ಈ ಜಿಲ್ಲೆ ಬತ್ತ ಬೆಳೆಯಲು ಅತ್ಯಂತ ಫಲವತ್ತಾದ ಪ್ರದೇಶ. ಇದು ಎಷ್ಟು ಸಮೃದ್ಧವಾಗಿತ್ತೆಂದರೆ ಇಲ್ಲಿ ಕಾಗೆಗಳಿಗೆ ಸಹ ಆಗಿ ಮಿಗುವಷ್ಟು ಅಕ್ಕಿಯಿದೆಯೆಂಬ ಪ್ರತೀತಿಯಿತ್ತು ; ಹಾಗೆಂಬ ಅರ್ಥದ ಒಂದು ಗಾದೆಯಿತ್ತು.

ಜಿಲ್ಲೆಯ ಜಮೀನುಗಳು ನೀಲಿಯನ್ನು ಬೆಳೆಯಲು ಬಹಳ ಅನುಕೂಲವಾಗಿದ್ದುವು. ಇವುಗಳಲ್ಲಿ ಮುಖ್ಯವಾದ ಪ್ರದೇಶ ಜಿಲ್ಲೆಯಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚಾಗಿತ್ತು. ಇವು ಮೊದಲು ರಾಜರಿಗೆ (ಜಮೀನ್ದಾರಿಗೆ) ಸೇರಿದ್ದುವು. ಈ ಜಮೀನುಗಳನ್ನು ಯೂರೋಪಿಯನ್ ಜನರು ರಾಜರಿಂದ ದೀರ್ಘ ಅವಧಿಯ ಗುತ್ತಿಗೆಗೆ ಹಿಡಿದು, ನೀಲಿ ಬೆಳೆಯಲು ಪ್ರಾರಂಭಿಸಿದರು. ತಾವು ಹಿಡಿದ ಜಮೀನುಗಳನ್ನು ಭಾರತೀಯ ರೈತರಿಗೆ ಗುತ್ತಿಗೆಗೆ ಕೊಟ್ಟರು ; ನೀಲಿ ಕಾರ್ಖಾನೆಗಳನ್ನು ಸ್ಥಾಪಿಸಿದರು. 1917ರ ವೇಳೆಗೆ ಅವರು 70 ಕಾರ್ಖಾನೆಗಳನ್ನು ಸ್ಥಾಪಿಸಿದ್ದರು. ಜಿಲ್ಲೆಯಲ್ಲಿ ಕಬ್ಬು ಮತ್ತು ಬತ್ತದ ಬೆಳೆ ಕಡಿಮೆಯಾಯಿತು.

ಯೂರೋಪಿಯನ್ ತೋಟಗಾರರು ರೈತರಿಗೆ ಬಹಳ ಕಠಿಣವಾದ ನಿಬಂಧನೆಗಳ ಮೇಲೆ ಜಮೀನನ್ನು ಸಾಗುವಳಿಗೆ ಕೊಟ್ಟಿದ್ದರು. ಪ್ರತಿ ರೈತನೂ ತನಗೆ ಇಷ್ಟವಿರಲಿ ಇಲ್ಲದಿರಲಿ, ಪ್ರತಿ ಇಪ್ಪತ್ತು ಕಟ್ಠೆ (ಒಂದು ಎಕರೆ) ಜಮೀನಿನಲ್ಲಿ ಮೂರುಕಟ್ಠೆಯಷ್ಟು ನೆಲದಲ್ಲಾದರೂ ನೀಲಿಯನ್ನು ಬಿತ್ತಿ ಬೆಳೆದು ಅದನ್ನು ತೋಟಗಾರ ನಿರ್ಣಯಿಸಿದ ಬೆಲೆಗೆ ಅವನ ಕಾರ್ಖಾನೆಗೆ ಮಾರಬೇಕಾಗಿತ್ತು. ಹಾಗೆ ಮಾಡದೆ ತಪ್ಪಿದರೆ ಅವನಿಗೆ ದಂಡ ವಿಧಿಸಲಾಗುತ್ತಿತ್ತು. ಈ ಪದ್ಧತಿಗೆ ತೀನ್ ಕಠಿಯಾ ಎಂದು ಹೆಸರಿತ್ತು. ಇವುಗಳ ಜೊತೆಗೆ ರೈತ ಜಮೀನ್ದಾರನಿಗೆ ಉಚಿತವಾಗಿ ಅನೇಕ ಸೇವೆಗಳನ್ನು ಸಲ್ಲಿಸಬೇಕಾಗಿತ್ತು. ಕಾರ್ಖಾನೆಯ ನೀಲಿ ಸಾಗಿಸಲು ತನ್ನ ಗಾಡಿಯನ್ನು ನೀಡುವುದು, ನಿಯಮಿತ ದಿನಗಳಲ್ಲಿ ಉಚಿತವಾಗಿ ಆಳುಗಳ ಸೇವೆಯನ್ನು ಒದಗಿಸುವುದು ಮುಂತಾದ ರೀತಿಯಲ್ಲಿ ನೆರವಾಗಬೇಕಾಗಿತ್ತು. ರೈತನ ಸ್ವಾತಂತ್ರ್ಯ ಪೂರ್ಣವಾಗಿ ಹರಣವಾಗಿ, ಅವನು ಒಂದು ರೀತಿಯಲ್ಲಿ ಜಮೀನ್ದಾರನಿಗೆ ಗುಲಾಮನೇ ಆಗಿದ್ದ. ಯೂರೋಪಿಯನ್ ಜಮೀನ್ದಾರರು ರೈತರನ್ನು ಹೊಡೆಯುವುದಕ್ಕೂ ಅವರ ಮನೆ ಆಸ್ತಿಗಳನ್ನು ಲೂಟಿ ಮಾಡುವುದಕ್ಕೂ ಹಿಂದೆಗೆಯುತ್ತಿರಲಿಲ್ಲ. ಅವರು ಏನೇ ಮಾಡಲೂ ಅವರಿಗೆ ಕಾನೂನಿನ ಬೆಂಬಲವಿತ್ತು. ರೈತರು ಅಜ್ಞಾನಿಗಳೂ ಅವಿದ್ಯಾವಂತರೂ ಅಧೀರರೂ ಆಗಿದ್ದುದರಿಂದ ಇದನ್ನು ಪ್ರತಿಭಟಿಸಲಾರದೆ ಕಷ್ಟಕ್ಕೆ ಒಳಗಾಗಿದ್ದರು. 1917ಕ್ಕೆ ಹಿಂದೆ ಸುಮಾರು ನೂರು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿತ್ತು. ಹಿಂಸೆ, ಸಂಕೋಲೆ, ಬಂಧನಗಳಿಂದ ತಪ್ಪಿಸಿಕೊಳ್ಳುವ ಮಾರ್ಗ ರೈತರಿಗೆ ಗೊತ್ತಿರಲಿಲ್ಲ.

ಆ ವೇಳೆಗೆ ಗಾಂಧೀಜಿ ದಕ್ಷಿಣ ಆಫ್ರಿಕದಲ್ಲಿ ಬಿಳಿಯರ ಸರ್ಕಾರಕ್ಕೆ ಎದುರಾಗಿ ಅಹಿಂಸಾ ಮಾರ್ಗದಿಂದ ಹೋರಾಡಿ ರಾಜಕೀಯದಲ್ಲಿ ಸತ್ಯ ಅಹಿಂಸೆಗಳನ್ನು ಪ್ರಥಮ ಬಾರಿಗೆ ಪ್ರಯೋಗಿಸಿ, ಶತ್ರುವಿನ ಒಂದು ತೊಟ್ಟು ರಕ್ತವನ್ನೂ ಕೆಡವದೆ ಅವನ ಮನಸ್ಸನ್ನು ಪರಿವರ್ತನೆಗೊಳಿಸಿ ಜಯಶಾಲಿಯಾಗಿ ಭಾರತಕ್ಕೆ ಹಿಂದಿರುಗಿದ್ದರು. ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಸತ್ಯಾಗ್ರಹವನ್ನು ಪ್ರಯೋಗಿಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದರೆ ಇನ್ನೂ ಯಾವ ವಿಷಯದಲ್ಲೂ ಅವರ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿರಲಿಲ್ಲ. ಗಯಾ ಕಾಂಗ್ರೆಸ್ ನಲ್ಲಿ ರಾಜಕುಮಾರ ಶುಕ್ಲನೆಂಬ ಚಂಪಾರಣ್ಯದ ಒಬ್ಬ ರೈತ ಗಾಂಧೀಜಿಯವರನ್ನು ಸಂಧಿಸಿ, ನೀಲಿ ಬೆಳೆಯುವ ರೈತರ ಕಷ್ಟಗಳನ್ನು ವಿವರಿಸಿ, ಗಾಂಧೀಜಿ ಚಂಪಾರಣ್ಯಕ್ಕೆ ಬಂದು ನೋಡಿ ಪರಿಹಾರ ಮಾರ್ಗವನ್ನು ಸೂಚಿಸಬೇಕೆಂದು ಬೇಡಿದ. ಗಾಂಧಿಯವರು ಮುಜಫರ್ ಪುರಕ್ಕೆ 1917ರ ಏಪ್ರಿಲ್ 10 ರಂದು ಹೋದರು. ಅಲ್ಲಿಯ ಪರಿಸ್ಥಿತಿಯನ್ನೂ ರೈತರ ಸಮಸ್ಯೆಯನ್ನೂ ಅವರು ಅಧ್ಯಯನ ಮಾಡಿದಾಗ, ಇದು ಸತ್ಯಾಗ್ರಹ ಮಾಡಲು ಅರ್ಹವಾದ ಸಮಸ್ಯೆ ಎಂಬುದು ಅವರಿಗೆ ಮನವರಿಕೆಯಾಯಿತು. ರೈತರ ಸ್ಥಿತಿಗತಿಗಳನ್ನು ವಿಚಾರಿಸಿ ತಿಳಿದುಕೊಳ್ಳಲು ಗಾಂಧೀಯವರು ಉದ್ದೇಶಿಸಿ, ಅದಕ್ಕೆ ಮೊದಲು ತೋಟಗಾರರ ಮತವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಹೊರಗಿನವರಾದ ಗಾಂಧಿಯವರು ತಮಗೂ ತಮ್ಮ ರೈತರಿಗೂ ನಡುವೆ ಪ್ರವೇಶಿಸುವ ಅಗತ್ಯವಿಲ್ಲವೆಂದು ತೋಟಗಾರರ ಸಂಘದ ಕಾರ್ಯದರ್ಶಿ ಹೇಳಿದ. ತಾವು ಹೊರಗಿನವರಾದರೂ ರೈತರು ಅಪೇಕ್ಷಿಸಿದರ ಅವರ ಸ್ಥಿತಿಗತಿಗಳ ವಿಚಾರಣೆ ನಡೆಸಲು ತಮಗೆ ಹಕ್ಕುಂಟೆಂದು ಗಾಂಧಿಯವರು ಮರ್ಯಾದೆಯಾಗಿ ಹೇಳಿದರು. ಗಾಂಧೀಯರು ತಿರುಹತ್ ಬಿಟ್ಟು ಹೋಗಬೇಕೆಂದು ಕಮಿಷನರ್ ಹೇಳಿದ. ಗಾಂಧಿಯವರು ಒಪ್ಪಲಿಲ್ಲ. ಚಂಪಾರಣ್ಯದ ಮುಖ್ಯ ಪಟ್ಟಣವಾದ ಮೋತಿಹಾರಿಗೆ ಐದು ಮೇಲಿ ದೂರದಲ್ಲಿ ರೈತನೊಬ್ಬನಿಗೆ ಆಗಿದ್ದ ಹಿಂಸೆಯನ್ನು ವಿಚಾರಿಸಲು ಗಾಂಧಿಯವರು ಅನುಚರರೊಂದಿಗೆ ಆನೆಯ ಮೇಲೆ ಕುಳಿತು ಹೊರಟರು. ನಡುದಾರಿಯಲ್ಲಿ ಸರ್ಕಾರ ಅವರ ಮೇಲೆ ತಡೆಯಾಜ್ಞೆ ಜಾರಿ ಮಾಡಿತು. ಚಂಪಾರಣ್ಯವನ್ನು ಬಿಟ್ಟು ಹೋಗಲು ಅವರು ಒಪ್ಪಲಿಲ್ಲ. ಅಪ್ಪಣೆಯನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ ಸರ್ಕಾರ ಅವರ ಮೇಲೆ ಮೊಕದ್ದಮೆ ಹೂಡಿತು. ಆಜ್ಞೆಯನ್ನುಲ್ಲಂಘಿಸಿದ್ದುಂಟೆಂದು ಗಾಂಧಿಯವರು ಒಪ್ಪಿಕೊಂಡರು ಸವಿನಯ ಪ್ರತಿಭಟನೆಯೇ ತಮ್ಮ ಉದ್ದೇಶವೆಂದು ಹೇಳಿದರು. ಆ ವೇಳೆಗೆ ಸರ್ಕಾರ ಮೊಕದ್ದಮೆಯನ್ನು ಹಿಂದೆಗೆದುಕೊಂಡಿತಲ್ಲದೆ ಗಾಂಧಿಯವರು ತಮ್ಮ ವಿಚಾರಣೆ ನಡೆಸಬಹುದೆಂದು ಅನುಮತಿ ನೀಡಿತು.

ಗಾಂಧೀಜಿ ಸರ್ಕಾರದ ಎದುರಿಗೆ ಇಡಲು ಒಂದು ವರದಿಯನ್ನು ಸಿದ್ಧಪಡಿಸತೊಡಗಿದರು. ರೈತರು ತಮ್ಮ ತಮ್ಮ ಕಷ್ಟಗಳನ್ನು ಕುರಿತು ಹೇಳಿಕೆ ಕೊಡಬಹುದೆಂದೂ ಸ್ವಯಂಸೇವಕರು ಅವನ್ನು ಬರೆದುಕೊಳ್ಳತಕ್ಕದೆಂದೂ ನಿಯಮಿಸಿದರು. ರೈತರು ನಿಜವನ್ನೇ ಹೇಳಬೇಕೆಂಬ ಕಟ್ಟುಪಾಡಾಗಿತ್ತು. ಹೇಳಿಕೆಯನ್ನು ನೀಡುವ, ಅದನ್ನು ಬರೆದುಕೊಳ್ಳುವ ಕೆಲಸ ಬಹಿರಂಗವಾಗಿಯೇ ನಡೆಯುತ್ತಿತ್ತು. ಒಬ್ಬ ಪೋಲೀಸ್ ಅಧಿಕಾರಿಯೂ ಅಲ್ಲಿದ್ದ. ಬಹುತೇಕ ಎಲ್ಲ ಹಳ್ಳಿಗಳಿಂದಲೂ ರೈತರು ತಂಡತಂಡವಾಗಿ ಬಂದು ಹೇಳಿಕೆಗಳನ್ನು ಕೊಡತೊಡಗಿದರು. ಯಾವಯಾವ ಜಮೀನ್ದಾರರ ಮೇಲೆ ಅತ್ಯಂತ ಗುರುತರವಾದ ಮತ್ತು ಹೆಚ್ಚಿನ ಆಕ್ಷೇಪಣೆಗಳಿದ್ದುವೋ, ಅವರನ್ನು ಗಾಂಧೀಜಿ ಸಂಧಿಸಲು ಪ್ರಯತ್ನಿಸಿದರು. ಆದರೆ ಜಮೀನ್ದಾರರು ಗಾಂಧೀಜಿಯೊಂದಿಗೆ ಆ ವಿಷಯವನ್ನು ಚರ್ಚಿಸಲು ಒಪ್ಪಲಿಲ್ಲ.

ಕೊನೆಗೆ ಯೂರೋಪಿಯನ್ ತೋಟಗಾರರು ಸರ್ಕಾರದ ಮೆಲೆ ಪ್ರಭಾವವನ್ನು ತಂದರು. ವಿಚಾರಣೆ ದೀರ್ಘವಾಯಿತೆಂದೂ ಇದನ್ನು ಮುಗಿಸಬೇಕೆಂದೂ ಸರ್ಕಾರ ಸೂಚಿಸಿತು.

ರೈತರ ಕಷ್ಟಗಳು ನಿಜವೆಂದೂ ಅವರಿಗೆ ಪರಿಹಾರ ದೊರಕದೆ ಚಂಪಾರಣ್ ಜಿಲ್ಲೆಯನ್ನು ಬಿಡುವುದು ತಮ್ಮ ಉದ್ದೇಶವಲ್ಲವೆಂದೂ ಸರ್ಕಾರವೇ ವಿಚಾರಣೆ ನಡೆಸಿ ರೈತರಿಗೆ ಕಷ್ಟಗಳಿವೆಯೆಂಬುದನ್ನು ಒಪ್ಪಿ ಪರಿಹಾರ ನೀಡಬೇಕೆಂದೂ ಗಾಂಧಿಯವರು ಉತ್ತರಿಸಿದರು. ಬಿಹಾರದ ಗವರ್ನರ್ ವಿಚಾರಣೆ ನಡೆಸಲು ಒಪ್ಪಿದ. ಇದಕ್ಕಾಗಿ ರಚಿಸಲಾದ ಸಮಿತಿಯಲ್ಲಿ ಗಾಂಧಿಯವರೂ ಸದಸ್ಯರಾಗಿರಬೇಕೆಂದು ಸೂಚಿಸಿದ. ವಿಚಾರಣೆಯ ಕಾಲದಲ್ಲಿ ಜೊತೆಯವರೊಂದಿಗೆ ಸಮಾಲೋಚಿಸಲೂ ರೈತರ ಪರವಾಗಿ ವಾದಿಸಲೂ ವಿಚಾರಣೆಯಿಂದ ರೈತರಿಗೆ ಸಮಾಧಾನ ಸಿಗದಿದ್ದರೆ ಮುಂದೇನು ಮಾಡಬೇಕೆಂಬುದನ್ನು ಅವರಿಗೆ ತಿಳಿಸಲು ತಮಗೆ ಸ್ವಾತಂತ್ರವಿರಬೇಕೆಂದು ಗಾಂಧೀಯವರು ಷರತ್ತು ಹಾಕಿದರು. ಸರ್ಕಾರ ಒಪ್ಪಿಕೊಂಡಿತು.

ವಿಚಾರಣಾ ಸಮಿತಿ ರೈತರ ಪರವಾಗಿಯೇ ತೀರ್ಪು ಕೊಟ್ಟಿತು. ತೋಟಗಾರರು ರೈತರಿಂದ ಅನ್ಯಾಯವಾಗಿ ವಸೂಲು ಮಾಡಿದ್ದ ಹಣದಲ್ಲಿ ಒಂದು ಭಾಗವನ್ನು ಅವರಿಗೆ ಹಿಂದಿರುಗಿಸಬೆಕೆಂದೂ ತೀನ್ ಕಠಿಯಾ ಪದ್ಧತಿಯನ್ನು ಕಾನೂನಿನ ಮೂಲಕ ರದ್ದು ಮಾಡಬೇಕೆಂದೂ ಸಲಹೆ ನೀಡಿತು. ತೋಟಗಾರರ ಪ್ರಭಾವ ಒತ್ತಾಯಗಳಿಗೆ ಮಣಿಯದೆ ಗವರ್ನರ್ ಆ ಸಲಹೆಗಳನ್ನು ಜಾರಿಗೆ ಕೊಟ್ಟ.

ಈ ಕಾರ್ಯಕ್ರಮಕ್ಕೆ ಗಾಂಧೀಜಿಗೆ ಒಟ್ಟು ಆರು ತಿಂಗಳುಗಳ ಕಾಲ ಹಿಡಿಯಿತು. ನೂರು ವರ್ಷಗಳಿಂದ ಇದ್ದ ತೊಂದರೆ ಪರಿಹಾರವಾಯಿತು. ಈ ಚಳವಳಿಗೆ ಪೂರ್ಣವಾಗಿ ತಗಲಿದ ವೆಚ್ಚ ಸುಮಾರು 3 ಸಾವಿರ ರೂಪಾಯಿಗಳು ಮಾತ್ರ.
ಸತ್ಯಾಗ್ರಹ ಚಳವಳಿ ಗೆಲ್ಲುವುದು ಹಣದಿಂದಲ್ಲ ; ಅಹಿಂಸೆ, ಸತ್ಯ, ಸಚ್ಛ ಮಾರ್ಗ, ಎದುರಾಳಿಯಲ್ಲಿ ಸಹ ಪ್ರೇಮ, ಅಸೀಮ ಶಾಂತಿ, ಉದ್ರೇಕದಿಂದಲೂ ಆಸ್ತಿನಾಶದಿಂದಲೂ ಪೂರ್ಣ ವಿಮುಖತೆ-ಇವುಗಳಿಂದ ಎಂಬುದು ಸಿದ್ಧವಾಯಿತು. 
	(ನೋಡಿ- ಗಾಂಧೀ,-ಮೋಹನ್‍ದಾಸ್-ಕರಮ್‍ಚಂದ್)					(ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ